ಇಬ್ರಾಹಿಂ ಆದಿಲ್ ಷಾ-
	ದಖನ್ನಿನಲ್ಲಿದ್ದ ಬಹುಮನಿ ರಾಜ್ಯ ಒಡೆದದ್ದರ ಫಲವಾಗಿ ಉದ್ಭವಿಸಿದ ಐದು ಸುಲ್ತಾನ ಮನೆತನಗಳಲ್ಲೊಂದಾದ ಬಿಜಾಪುರದ ಆದಿಲ್ ಷಾಹಿ ಮನೆತನದಲ್ಲಿ (1489-1686) ಆಳಿದವರ ಪೈಕಿ ಈ ಹೆಸರಿನವರು ಇಬ್ಬರು.

	ಇಬ್ರಾಹಿಂ ಆದಿಲ್ ಷಾ I : 1534-1557. ದಖನ್ನಿನ ಸುಲ್ತಾನರ ಮನೆತನಗಳಲ್ಲೊಂದಾದ ಬಿಜಾಪುರದ ಆದಿಲ್ ಷಾಹಿ ಮನೆತನದಲ್ಲಿ ನಾಲ್ಕನೆಯ ಸುಲ್ತಾನ. ಈ ಮನೆತನದ ಸ್ಥಾಪಕನಾದ ಯೂಸುಫ್ ಆದಿಲ್ ಷಾನ ಮೊಮ್ಮಗ, ಮಲ್ಲು ಎಂಬುವನು ಈತನ ಅಣ್ಣ. ಇವನಿಗಿಂತ ಮುಂಚೆ ಅವನು ಸ್ವಲ್ಪ ಕಾಲ ರಾಜ್ಯವಾಳಿದ. ಈತನ ತಾತ ಷಿಯ ಪಂಗಡದ ಮುಸ್ಲಿಮನಾಗಿದ್ದರೂ ಇವನು ಸುನ್ನಿ ಮತಸ್ಥ. ದೇಶದ ರಾಜಕೀಯದಲ್ಲಿ ಹೊರಗಿನವರ ಕೈವಾಡ ತಗ್ಗಿಸಬೇಕೆಂಬ ಉದ್ದೇಶದಿಂದ ಇವನು ಹೊರದೇಶಗಳಿಂದ ಬಂದಿದ್ದ ಅಡಳಿತಾಧಿಕಾರಿಗಳನ್ನೂ ಸೈನಿಕರನ್ನೂ ಹಿಂದಕ್ಕೆ ಕಳುಹಿಸಿ ಅವರ ಸ್ಥಾನಗಳಲ್ಲಿ ದಖನೀ ಜನರನ್ನೂ ಆಫ್ರಿಕನ್ನರನ್ನೂ ನೇಮಿಸಿದ; ಪರ್ಷಿಯನ್ ಭಾಷೆಯ ಬದಲು ಕನ್ನಡ ಮರಾಠಿಗಳನ್ನು ಆಡಳಿತ ಭಾಷೆಗಳಾಗಿ ಬಳಸಬೇಕೆಂದು ಆಜ್ಞಾಪಿಸಿದ. ಈ ಕ್ರಮದ ಫಲವಾಗಿ ಸ್ಥಳೀಯ ಮುಸ್ಲಿಮರಿಗೂ ಹಿಂದೂಗಳಿಗೂ ಸರ್ಕಾರಿ ಹುದ್ದೆಗಳು ದೊರಕುವುದು ಸಾಧ್ಯವಾಯಿತು.

	ಇವನ ಕಾಲದಲ್ಲಿ ದಖನ್ನಿನಲ್ಲಿದ್ದ ಇತರ ಸುಲ್ತಾನರ ಮನೆತನಗಳಾದ ಇಮಾದ್‍ಷಾಹಿ (ಬೀರಾರ್), ನಿಜಾಂ ಷಾಹಿ (ಅಹಮದ್ ನಗರ), ಕುತುಬ್ ಷಾಹಿ (ಗೋಲ್ಕೊಂಡ), ಬಾರಿದ್ ಷಾಹಿ (ಬೀದರ್) ರಾಜ್ಯಗಳಲ್ಲೂ ಕೃಷ್ಣದೇವರಾಯನ ಅನಂತರದಲ್ಲಿ ಇಳಿಮುಖವಾಗಿದ್ದ ವಿಜಯನಗರದಲ್ಲೂ ಅಂತಃಕಲಹಗಳು ಸಾಮಾನ್ಯವಾಗಿದ್ದುವು. ಪಕ್ಷ ಪ್ರತಿಪಕ್ಷಗಳು ನೆರೆರಾಜ್ಯಗಳ ನೆರವಿನಿಂದ ಮಸಲತ್ತಿನಲ್ಲಿ ತೊಡಗಿದ್ದುವು. ಈ ಗೊಂದಲದ ಫಲವಾಗಿ ಇಬ್ರಾಹಿಮನಿಗೂ ಶಾಂತಿ ಇಲ್ಲವಾಗಿತ್ತು. ತನ್ನ ಆಳ್ವಿಕೆಯ ಹೆಚ್ಚು ಕಾಲವನ್ನು ಇವನು ಯುದ್ಧಗಳಲ್ಲಿ ಕಳೆದ.											*

	ಇಬ್ರಾಹಿಂ ಅದಿಲ್ ಷಾ II : 1580-1626 ಬಿಜಾಪುರದ ಆದಿಲ್ ಷಾಹಿ ಮನೆತನದಲ್ಲಿ ಆರನೆಯ ಸುಲ್ತಾನ. ಮೊದಲನೆಯ ಇಬ್ರಾಹಿಂ ಆದಿಲ್ ಷಾನ ಮೊಮ್ಮಗ. ಮೊದಲನೆಯ ಇಬ್ರಾಹಿಂ ಆದಿಲ್ ಷಾನ ಮಗನಾದ ಆಲಿ ಆದಿಲ್ ಷಾ ಸತ್ತ ಮೇಲೆ ಒಂಬತ್ತನೆಯ ವಯಸ್ಸಿನಲ್ಲಿ ಪಟ್ಟಕ್ಕೆ ಬಂದ. ಈತ ಸಾಮ್ರಾಟ್ ಅಕ್ಬರ್ ಮತ್ತು ಗೋಲ್ಕೊಂಡದ ಮಹಮ್ಮದ್ ಕುಲಿ ಕುತುಬ್ ಷಾ ಕಾಲದಲ್ಲಿ ಬಿಜಾಪುರದಲ್ಲಿ ಆಳುತ್ತಿದ್ದ. ಈತ ಪರಮತ ಸಹಿಷ್ಣು, ವಿವೇಕಿ. ಕಲೆಗೂ ಶಾಸ್ತ್ರಗಳಿಗೂ ಆಶ್ರಯದಾತ. ಪರ್ಷಿಯದಿಂದಲೂ ಭಾರತದ ಹಲವಾರು ಭಾಗಗಳಿಂದಲೂ ಕವಿಗಳೂ ಲೇಖಕರೂ ಸಂತರೂ ಆಗ ಬಿಜಾಪುರಕ್ಕೆ ಆಗಮಿಸಿದ್ದರು. ಈತನ ಕಾಲದಲ್ಲಿ ವಿಭಿನ್ನ ಕಲಾಶಾಖೆಗಳಲ್ಲಿ ಪ್ರಸಿದ್ಧವಾದ ಗ್ರಂಥಗಳು ರಚಿತವಾದುವು. ಇಬ್ರಾಹಿಮನಿಗೆ ಶಿಲ್ಪಕಲೆಯೆಂದರೆ ಬಹಳ ಇಷ್ಟ. ಈತನ ಆಸ್ಥಾನದಲ್ಲಿದ್ದ ಪರ್ಷಿಯನ್ ಭಾಷೆಯ ಕವಿಗಳಲ್ಲಿ ಜಹೂರಿ ಮತ್ತು ಮಲಿಕ್‍ಕುಮಿ ಪ್ರಸಿದ್ಧರು. ಅಬುಲ್ ಕಾಸಿಂ ಫರಿಷ್ತ ಎಂಬವನು ಆದಿಲ್ ಷಾನ ಪ್ರೋತ್ಸಾಹದಿಂದ ತಾರೀಖ್ ಫರಿಷ್ತ ಎಂಬ ಹೆಸರಿನಲ್ಲಿ ಭಾರತದ ಇತಿಹಾಸ ಬರೆದಿದ್ದಾನೆ. ಭಾರತೀಯ ಭಾಷೆ ಸಂಸ್ಕøತಿಗಳಿಗೆ ಈ ಸುಲ್ತಾನ ತುಂಬ ಪ್ರೋತ್ಸಾಹ ನೀಡುತ್ತಿದ್ದ. ಪರ್ಷಿಯನ್ ಭಾಷೆಯಲ್ಲೂ ಇವನು ವಿದ್ವಾಂಸನಾಗಿದ್ದ. ಇವನಿಗೆ ದಖನಿ ಭಾಷೆಯಲ್ಲಿ ಬಹಳ ಪ್ರೇಮವಿತ್ತು. ಕಿತಾಬ್‍ನವರಸವೆಂಬ ಪುಸ್ತಕವನ್ನು ಇವನು ಬರೆದನೆಂದು ಹೇಳಲಾಗಿದೆ. ಇದು ಸಂಗೀತವನ್ನು ಕುರಿತು ಬರೆದಿರುವ ಪುಸ್ತಕ. ಇದರಲ್ಲಿ ರಾಗಗಳ ವಿವರಣೆಯೂ ಒಂದೊಂದು ರಾಗದ ಮೇಲೆ ಇವನು ಬರೆದಿರುವ ಗೀತೆಗಳೂ ದೋಹಗಳೂ ಇವೆ. 17 ರಾಗಗಳಲ್ಲಿ 59 ಗೀತೆಗಳು ಮತ್ತು 17 ದೋಹಗಳಿವೆ. ಗೀತೆಗಳು ಈ ಪ್ರಕಾರತ ಇವೆ: ಭೂಪಾಲಿ-2, ರಾಮಕರಿ-2, ಭೈರು-2, ಹಜೀಬ್-ಒಂದು, ಮಾರು-2, ಅಸಾವರಿ-2, ದೇಶಿ-ಒಂದು, ಪೂರ್ಬಾ-ಒಂದು, ಬರಾರಿ-ಒಂದು, ತೋಡಿ-4, ಮಲ್ಹಾರ್-5, ಗೌರಿ-2, ಕಲ್ಯಾಣ-4, ಧನಸುರಿ-2, ಕೇದಾರಾ-4, ನವರೋಜ್-ಒಂದು. ಮತ್ತು ಕನ್ನಡ ಅಥವಾ ಕರ್ನಾಟ-19. ಇವುಗಳಲ್ಲಿ ಕನ್ನಡ ಅಥವಾ ಕರ್ನಾಟಕ ರಾಗ ಇವನಿಗೆ ಹೆಚ್ಚು ಇಷ್ಟ. ಈ ಪುಸ್ತಕವನ್ನು ಬರೆದದ್ದು ಸುಮಾರು ಕ್ರಿ.ಶ. 1600ರಲ್ಲಿ. ಇವನ ಸಂಗೀತದ ಹುಚ್ಚು ಈತನ ಎಲ್ಲ ವ್ಯವಹಾರಗಳಲ್ಲೂ ಪ್ರಕಟವಾಗಿತ್ತು. ನವರಸವೆಂಬುದು ಈತನ ಪ್ರೀತಿಯ ಶಬ್ದ. ಇವನ ಪಟ್ಟದ ಆನೆಯ ಹೆಸರು ನವರಸ್ ಪೈಕರ್. ಧ್ವಜವೇ ಮುಂತಾದ ಒಂಬತ್ತು ಲಾಂಛನಗಳೂ ನವರಸವೇ. ಇವನು ಆಬಾದ್ ಮಾಡಿದ್ದ ಪಟ್ಟಣ ನವರಸಪುರವೆಂದೂ ನವರಸಮಹಲ್ ಮತ್ತು ನವರಸಬಿಹಿಷ್ತ್ ಎಂಬ ಕಟ್ಟಡಗಳನ್ನು ಇವನು ಕಟ್ಟಿಸಿದನೆಂದೂ ಹೇಳಲಾಗಿದೆ. ಇದರ ಒಂದು ಕೇರಿ ಸಂಗೀತ ವಿದ್ವಾಂಸರಿಗೆ ಮೀಸಲು. ಇಲ್ಲಿದ್ದ ಕಲಾಕಾರರು ಸಾವಿರಾರು ಮಂದಿ. ಉತ್ತರ ಭಾರತ ಹಾಗೂ ವಾರಾಣಾಸಿಯಿಂದ ಸಾವಿರಾರು ಮಂದಿ ಸಂಗೀತ ವಿದ್ವಾಂಸರು ಇಲ್ಲಿ ಬಂದು ವಾಸಿಸುತ್ತಿದ್ದರೆಂದು ಪ್ರತೀತಿ. ಉತ್ತಮ ದರ್ಜೆಯ ವಿದ್ವಾಂಸರಿಗೆ ಅತಾಯಿ ಎಂದೂ ಅವರಿಗಿಂತ ಕಡಿಮೆ ದರ್ಜೆಯವರಿಗೆ ಗುಣಿಜನರೆಂದೂ ಹೆಸರಿತ್ತಂತೆ. ಈತನ ಸಂಗೀತ ಪ್ರೇಮದಿಂದ ಇವನಿಗೆ ಜಗದ್ಗುರುವೆಂಬ ಖ್ಯಾತಿ ಬಂತೆಂದು ಪ್ರತೀತಿ. ಮೆಡೋಸ್ ಟೇಯ್ಲರ್ ಎಂಬ ಇತಿಹಾಸಕಾರ ಈತನನ್ನು ಆದಿಲ್‍ಷಾಹಿ ಮನೆತನದಲ್ಲೇ ಅತ್ಯಂತ ಶ್ರೇಷ್ಠನೆಂದು ಹೊಗಳಿದ್ದಾನೆ. ಈ ಮನೆತನದ ಸ್ಥಾಪಕನಾದ ಯೂಸೂಫ್ ಆದಿಲ್ ಷಾನನ್ನು ಬಿಟ್ಟರೆ ಇವನಷ್ಟು ದಕ್ಷನೂ ಜನಪ್ರಿಯನೂ ಆಗಿದ್ದ ದೊರೆ ಈ ಮನೆತನದಲ್ಲೇ ಬೇರೆ ಯಾರೂ ಹುಟ್ಟಲಿಲ್ಲವೆಂದು ಟೇಯ್ಲರನ ಅಭಿಪ್ರಾಯ.										
	(ಎಸ್.ಎ.ಟಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ